ರಸಲ್, ಡಬ್ಲ್ಯು ಎ
1830-92 ಉತ್ತರ ಕರ್ನಾಟಕದಲ್ಲಿ ನವೋದಯ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಮತ್ತು ಕನ್ನಡ ಭಾಷೆಯ ಏಳ್ಗೆಗಾಗಿ ದುಡಿದ ಪಾರ್ಶವಾತ್ಯ ವಿದ್ವಾಂಸ ವಿಲಿಯಂ ಅಲೆನ್ ರಸಲ್ ಇವನ ಪೂರ್ಣ ಹೆಸರು.
  	ಹುಟ್ಟಿದ್ದು 1830ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದ ಅನಂತರ ಪುಣೆಯ ಡೆಕ್ಕನ್ ಕಾಲೇಜಿನ ಪ್ರಿನ್ಸಿಪಾಲನಾಗಿ ನೇಮಕಗೊಂಡ (1860) 1862ರಲ್ಲಿ ಮುಂಬಯಿ ಪ್ರಾಂತ್ಯದ ಮಧ್ಯ ವಿಭಾಗದಲ್ಲಿ ಶಿಕ್ಷಣಾಧಿಕಾರಿಯಾದ. ಅನಂತರ ಉತ್ತರ ವಿಭಾಗದಲ್ಲಿ ಒಂದು ವರ್ಷ ಕೆಲಸ ಮಾಡಿ. 1865ರ ಮೇ ತಿಂಗಳಲ್ಲಿ ದಕ್ಷಿಣ ವಿಭಾಗದ ಅಂದರೆ ಇಂದಿನ ಉತ್ತರ ಕರ್ನಾಟಕ ಭಾಗದ ಶಿಕ್ಷಾಣಾಧಿಕಾರಿಯಾಗಿ ನೇಮಕಗೊಂಡ ಈ ಭಾಗದಲ್ಲಿ ಈತ 20 ವರ್ಷ ಸೇವೆ ಸಲ್ಲಿಸಿ 1885ರ ಮಾರ್ಚ್‍ನಲ್ಲಿ ನಿವೃತ್ತನಾಗಿ ಇಂಗ್ಲೆಂಡಿಗೆ ಮರಳಿದ. ತನ್ನ 62ನೆಯ ವಯಸ್ಸಿನಲ್ಲಿ 1862 ಡಿಸೆಂಬರ್‍ನಲ್ಲಿ ಜರ್ಮನಿಯಲ್ಲಿ ನಿಧನನಾದ.
  	19ನೆಯ ಶತಮಾನದ ಪ್ರಾರಂಭ ಕಾಲದಲ್ಲಿ ಉತ್ತರ ಕರ್ನಾಟಕವನ್ನು ದಕ್ಷಿಣ ಮಹಾರಾಷ್ಟ್ರವೆಂದು ಕರೆಯಲಾಗುತ್ತಿತ್ತು. ಇಲ್ಲಿಯ ಸುಸಂಸ್ಕøತರ ಭಾಷೆ ಮರಾಠಿಯಾಗಿತ್ತು. ಲೆಕ್ಕಪತ್ರಗಳನ್ನೆಲ್ಲ ಸಂಪೂರ್ಣವಾಗಿ ಮರಾಠಿಯಲ್ಲಿಯೇ ಬರೆಯುವ ಪರಿಪಾಠವಿತ್ತು. ಇಂಥ ಸಮಯದಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಉನ್ನತ ಸ್ಥಾನ ಮಾನಗಳನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ರಸಲ್‍ನದು ರಸಲ್ ಕನ್ನಡದ ಕೆಲಸವನ್ನು ಹತ್ತಾರು ರೀತಿಯಲ್ಲಿ ಮಾಡಿದ. ಉತ್ತರ ಕರ್ನಾಟಕ ಭಾಗದ ಭಾಷೆ ಕನ್ನಡವೆಂದು ಅರಿತ ಈತ ಅಲ್ಲಿಯ ಮಕ್ಕಳಿಗೆಲ್ಲ ಕನ್ನಡದಲ್ಲಿಯೇ ಶಿಕ್ಷಣ ದೊರಕುವಂತೆ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದ. ಉನ್ನತ ಹುದ್ದೆಗಳು ಕನ್ನಡಿಗರಿಗೂ ದೊರಕುವಂತೆ ಮಾಡಿದ. ಕನ್ನಡ ಬಾರದ ಮರಾಠಿ ಶಿಕ್ಷಣಾಧಿಕಾರಿಗಳು ಕನ್ನಡ ಕಲಿಯುವಂತೆ ನಿಗದಿಸಿದ. ಕನ್ನಡದಲ್ಲಿ ಕ್ರಮಿತ ಪುಸ್ತಕಗಳನ್ನು ಬರೆಯುವುದಕ್ಕಾಗಿ ಒಬ್ಬ ಭಾಷಾಂತರಕಾರನನ್ನು ನಿಯಮಿಸಿದ. ತಿಂಗಳಿಗೆ 25 - 30 ರೂಪಾಯಿ ಸಂಬಳ ಕೊಟ್ಟು ಒಬ್ಬ ಕನ್ನಡ ಪಂಡಿತರನ್ನು ನಿಯಮಿಸಿಕೊಂಡು ರಸಲ್ ತಾನೇ ಸ್ವತಃ ಕನ್ನಡ ಕಲಿತ. ಕನ್ನಡ ಪಾಂಡಿತ್ಯದ ಪ್ರೋತ್ಸಾಹಕ್ಕಾಗಿ ಒಂದು ಸಾವಿರ ರೂಪಾಯಿಯಷ್ಟು ಸ್ವಂತ ಹಣವನ್ನು ಸಕಾರದಲ್ಲಿ ಠೇವಣಿ ಇರಿಸಿ, ಅದರ ಬಡ್ಡಿಯಿಂದ ವರ್ಥ್ ಬಹುಮಾನ ಎಂಬ ಬಹುಮಾನ ಪದ್ಧತಿಯನ್ನು ಪ್ರಾರಂಭಿಸಿದ. ಸ್ವತಃ ಲೇಖಕನಾಗಿದ್ದ ಈತ ಬರೆಹಗಾರರಿಗೆ ಪ್ರೋತ್ಸಾಹ ನೀಡಿದ. ಈತ ರಚಿಸಿದ ಫೈರ್ ಫ್ಲೈಸ್ ಇನ್ ಇಂಡಿಯಾ ಎಂಬ ಸರಸ ಕವಿತೆ ಇಂಡಿಯನ್ ಆಂಟಿಕ್ವೆರಿ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ